ಫ್ರಾನ್ಸಿಸ್ ಜೇಮ್ಸ್, ಚೈಲ್ಡ್
1825-96. ಅಮೆರಿಕೆಯ ಪ್ರಸಿದ್ಧ ಭಾಷಾಶಾಸ್ತ್ರಜ್ಞ ಮತ್ತು ಹೆಸರಾಂತ ಬ್ಯಾಲೆಡ್ ವಿದ್ವಾಂಸ. 1846ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು 1851ರಿಂದ ಅದೇ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿದ್ದು ಅನಂತರ 1876ರಿಂದ ತನ್ನ ಜೀವಿತದ ಕೊನೆಯವರೆಗೂ ಅಲ್ಲಿನ ಇಂಗ್ಲಿಷ್ ಸಾಹಿತ್ಯ ಪೀಠದ ಮುಖ್ಯಸ್ಥನಾಗಿ ಸೇವೆಸಲ್ಲಿಸಿದ. ಜಾನಪದ ಸಾಮಗ್ರಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಜಾನಪದ ಅಧ್ಯಯನದ ಒಂದು ದೊಡ್ಡ ಕೇಂದ್ರವನ್ನಾಗಿ ಮಾಡಿದ ಈತ ತನ್ನ ಶಿಷ್ಯರ ದೊಡ್ಡ ತಂಡವನ್ನೇ ಜಾನಪದ ಕ್ಷೇತ್ರಕ್ಕೆ ಅರ್ಪಿಸಿದ. ಅವರಲ್ಲಿ ಫ್ರಾನ್ಸಿಸ್ ಬಿ ಗುಮ್ರೆ ಗಣ್ಯ.

1857-58ರಲ್ಲಿ ಇವನ ಮೊದಲ ಬ್ಯಾಲೆಡ್ ಸಂಕಲನವಾದ ಇಂಗ್ಲಿಷ್ ಅಂಡ್ ಸ್ಕಾಟಿಷ್ ಬ್ಯಾಲೆಡ್ಸ್ ಎಂಬ ಗ್ರಂಥ ಎಂಟು ಸಂಪುಟಗಳಲ್ಲಿ (1857-58) ಪ್ರಕಟವಾಯಿತು. ಇವನ ಕೊನೆಯ ಸಂಕಲನ ದಿ ಇಂಗ್ಲಿಷ್ ಅಂಡ್ ಸ್ಕಾಟಿಷ್ ಪಾಪ್ಯುಲರ್ ಬ್ಯಾಲೆಡ್ಸ್ 1882-98 ರ ಅವಧಿಯಲ್ಲಿ ಹತ್ತು ಭಾಗಗಳಲ್ಲಿ ಪ್ರಕಟಗೊಂಡು ಅನಂತರ ಅದು ಐದು ಬೃಹತ್ ಸಂಪುಟಗಳಲ್ಲಿ ಬೆಳಕು ಕಂಡಿತು. ಇದರಿಂದಾಗಿ ಇವನ ಹೆಸರು ಬ್ಯಾಲೆಡ್ ಪ್ರಪಂಚದಲ್ಲಿ ಶಾಶ್ವತವಾಗಿ ಉಳಿದಿದೆ. ಇದು 305 ಬ್ಯಾಲೆಡ್ಡುಗಳ ಒಂದು ದೊಡ್ಡ ಸಂಕಲನ. ಇಂದಿಗೂ ಬ್ಯಾಲೆಡ್ ಕ್ಷೇತ್ರದ ಒಂದು ಆಕರಗ್ರಂಥ. ಚೈಲ್ಡ್ ಒಂದೊಂದು ಬ್ಯಾಲೆಡ್ಡನ್ನು ಜಾಗರೂಕತೆಯಿಂದ ಪರಿಷ್ಕರಿಸಿ, ಅನೇಕ ಭಿನ್ನಪಾಠಗಳೊಡನೆ ತೂಗಿನೋಡಿ, ಸಾಂಸ್ಕøತಿಕ, ಸಾಮಾಜಿಕ ರಾಜಕೀಯ ಭೌಗೋಳಿಕ ಹೀಗೆ ಎಲ್ಲ ಪೂರಕ ಮಾಹಿತಿಗಳನ್ನೂ ಒದಗಿಸಿ ಪ್ರಕಟಿಸಿದ್ದಾನೆ. ಈ ಬಗೆಯ ಅಧ್ಯಯನದಲ್ಲಿ ಈತನಿಗೆ ನೆರವಾದವರು ಯೂರೋಪಿನ ಬ್ಯಾಲೆಡ್ ವಿದ್ಯಾರ್ಥಿಗಳು, ಆ ವಿದ್ಯಾರ್ಥಿಗಳಲ್ಲಿ ಡೆನ್ಮಾರ್ಕಿನ ಸ್ವೆನ್ ಗ್ರುಂಡ್ಟ್‍ವಿಗ್ ಮುಖ್ಯ. ಈತ ವಿಕ್ಟೋರಿಯನ್ ಕಾಲದ ಸಂಗ್ರಾಹಕರಂತೆ ಕೇವಲ ಸಂಗ್ರಹಗಳನ್ನಷ್ಟೇ ಹೊರತರದೆ ತನ್ನ ಸಂಗ್ರಹ ಅಧ್ಯಯನಗಳನ್ನು ವೈಜ್ಞಾನಿಕ ರೀತಿಯಲ್ಲಿ ನಡೆಸಿ ಬ್ಯಾಲೆಡ್ಡುಗಳ ಅಧ್ಯಯನಕ್ಕೆ ಒಂದು ಬುನಾದಿಯನ್ನು ಕಲ್ಪಿಸಿದ. ಇವನಿಂದ ಪ್ರಭಾವಿತರಾದ ಇವನ ಶಿಷ್ಯರು ಬ್ಯಾಲೆಡ್ ವಿದ್ವತ್ ಬೆಳೆಸಲು ಸಹಾಯಕರಾದರು.

ಚೈಲ್ಡ್ ಸಂಕಲಗಳು ಪ್ರಕಟವಾದ ಮೇಲೆ ಇಂಗ್ಲಿಷ್ ಮತ್ತು ಸ್ಕಾಟಿಷ್ ಬ್ಯಾಲೆಡ್ಡುಗಳಲ್ಲಿ ಹೊಸ ಬ್ಯಾಲೆಡ್ಡುಗಳಾವುವೂ ಪ್ರಕಟಗೊಳ್ಳಲಿಲ್ಲ. ಅವುಗಳ ಭಿನ್ನರೂಪಗಳು ಮಾತ್ರ ದೊರೆತಿವೆ.

	ಚೈಲ್ಡ್ ಬ್ಯಾಲೆಡ್ ಸಂಗ್ರಹಗಳು ಪ್ರಕಟಗೊಳ್ಳುತ್ತಿದ್ದ ಅವಧಿಯಲ್ಲೇ ಅಮೆರಿಕನ್ ಫೋಕ್‍ಲೋರ್ ಸೊಸೈಟಿಯನ್ನು ಕೆಲವು ಹಾರ್ವರ್ಡನ ಉತ್ಸಾಹಿಗಳು ಸ್ಥಾಪಿಸಿದರು. 1888ರಲ್ಲಿ ಜರ್ನಲ್ ಆಫ್ ಅಮೆರಿಕನ್ ಫೋಕ್‍ಲೋರ್‍ನ ಪ್ರಥಮ ಸಂಚಿಕೆ ಪ್ರಕಟಗೊಂಡಿತು. ಈ ಜಾನಪದ ಪತ್ರಿಕೆ ಚೈಲ್ಡ್ ಒಳಗೊಂಡಂತೆ ಅನೇಕ ಗಣ್ಯ ವಿದ್ವಾಂಸರ ಪರಂಪರೆಯನ್ನೇ ತನ್ನ ಸಂಪಾದಕ ಮಂಡಲಿಯಲ್ಲಿ ಪಡೆದುಕೊಂಡು ಅಮೆರಿಕೆಯ ಜಾನಪದ ಸಂಗ್ರಹ ಅಧ್ಯಯನಕ್ಕೆ ಉತ್ತಮ ಅವಕಾಶವನ್ನು ಕಲ್ಪಿಸಿತು.
(ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ